Genesis - Chapter 33
Holy Bible

1 : ಯಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಮಂದಿ ಜನರ ಸಮೇತ ಬರುತ್ತಿದ್ದನು. ಕೂಡಲೆ ಅವನು ಲೇಯಳಿಗೂ ರಾಖೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿದನು.
2 : ಅವರನ್ನು ಬೇರೆ ಬೇರೆ ಮಾಡಿ ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ, ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ, ಕಡೆಯಲ್ಲಿ ರಾಖೇಲಳನ್ನೂ ಜೋಸೆಫನನ್ನೂ ನಿಲ್ಲಿಸಿದನು.
3 : ತಾನೇ ಅವರ ಮುಂದಾಗಿ ನಡೆದನು. ತನ್ನ ಅಣ್ಣನನ್ನು ಸವಿೂಪಿಸುತ್ತಿರುವಾಗ ಏಳು ಸಾರಿ ನೆಲದ ತನಕ ಬಗ್ಗಿ ನಮಸ್ಕರಿಸಿದನು.
4 : ಆದರೆ ಏಸಾವನು ಅವನನ್ನು ಎದುರುಗೊಳ್ಳಲು ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು.
5 : ಅವರಿಬ್ಬರ ಕಣ್ಣಲ್ಲೂ ನೀರು ಹರಿಯಿತು. ಬಳಿಕ ಏಸಾವನು ಕಣ್ಣೆತ್ತಿ ಆ ಮಹಿಳೆಯರನ್ನೂ ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ವಿಚಾರಿಸಿದನು. ಯಕೋಬನು, “ದೇವರು ನಿಮ್ಮ ದಾಸನಾದ ನನಗೆ ಅನುಗ್ರಹಿಸಿದ ಮಕ್ಕಳು ಇವರೇ” ಎಂದು ಹೇಳಿದನು.
6 : ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ನಮಸ್ಕಾರ ಮಾಡಿದರು.
7 : ಆಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು; ಕಡೆಯಲ್ಲಿ ಜೋಸೆಫನೂ ರಾಖೇಲಳೂ ಬಂದು ಎರಗಿದರು.
8 : ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪರಿವಾರ ಏತಕ್ಕೆ?” ಎಂದು ಕೇಳಿದನು. ಯಕೋಬನು, “ಒಡೆಯನ ದಯೆ ನನಗೆ ದೊರಕಲೆಂದು ನಾನು ತಮಗೆ ಅದನ್ನು ಕಳಿಸಿ ಕೊಟ್ಟೆ,” ಎಂದನು.
9 : ಏಸಾವನು, “ತಮ್ಮಾ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ,” ಎಂದನು.
10 : ಅದಕ್ಕೆ ಯಕೋಬನು, “ಇಲ್ಲ, ಹಾಗೆನ್ನಬಾರದು. ನಿಮಗೆ ನನ್ನ ಮೇಲೆ ದಯೆಯಿರುವುದು ನಿಜವಾಗಿದ್ದಲ್ಲಿ ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಲೇಬೇಕು. ನಿಮ್ಮನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು. ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದೇ ಸಾಕು.
11 : ದೇವರ ಕೃಪೆಯಿಂದ ನನಗೆ ಬೇಕಾದುದೆಲ್ಲ ಇದೆ; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ತಾವು ದಯವಿಟ್ಟು ಅಂಗೀಕರಿಸಬೇಕು,” ಎಂದು ಹೇಳಿ ಒತ್ತಾಯಪಡಿಸಿದ್ದರಿಂದ ಏಸಾವನು ಆ ಕಾಣಿಕೆಯನ್ನು ತೆಗೆದುಕೊಂಡನು.
12 : ತರುವಾಯ ಏಸಾವನು, “ಗುಡಾರಗಳನ್ನು ಬಿಟ್ಟು ಮುಂದಕ್ಕೆ ಪ್ರಯಾಣ ಬೆಳೆಸೋಣ; ನಾನೂ ನಿನ್ನ ಸಂಗಡ ಬರುತ್ತೇನೆ,” ಎಂದನು.
13 : ಅದಕ್ಕೆ ಯಕೋಬನು, “ನನ್ನೊಡೆಯರಾದ ನಿಮಗೆ ತಿಳಿದಿರುವಂತೆ ನನ್ನ ಮಕ್ಕಳು ಎಳೆಯಪ್ರಾಯದವರು; ಈದಿರುವ ದನಕುರಿಗಳೂ ನನಗಿವೆ; ಒಂದೇ ದಿನ ಹೆಚ್ಚಾಗಿ ದಾರಿ ನಡೆಸಿದೆನಾದರೆ ಆಡುಕುರಿಗಳೆಲ್ಲವೂ ಸತ್ತು ಹೋದಾವು.
14 : ತಾವು ದಯವಿಟ್ಟು ದಾಸನಿಗಿಂತಲೂ ಮುಂಚೆ ಹೊರಡಬಹುದು. ನಾನು ನನ್ನ ಮುಂದಿರುವ ಆಡುಕುರಿಗಳ ಹಾಗೂ ಮಕ್ಕಳ ನಡಿಗೆಗೆ ತಕ್ಕ ಹಾಗೆ ಮೆಲ್ಲಮೆಲ್ಲನೆ ನಡೆದು ನನ್ನೊಡೆಯರ ನಾಡಾದ ಎದೋಮಿಗೆ ಬರುತ್ತೇನೆ,” ಎಂದನು.
15 : ಏಸಾವನು, “ಹಾಗಾದರೆ, ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ,” ಎಂದನು. ಯಾಕೋಬನು, “ಏತಕ್ಕೆ, ಬೇಡಿ. ನನ್ನೊಡೆಯರ ದಯೆ ನನ್ನ ಮೇಲಿದ್ದರೆ ಸಾಕು,” ಎಂದು ಹೇಳಿದನು.
16 : ಏಸಾವನು ಆ ದಿನವೇ ಎದೋಮ್ ನಾಡಿಗೆ ಹೊರಟು ಹೋದನು.
17 : ಇತ್ತ ಯಾಕೋಬನು ಪ್ರಯಾಣ ಬೆಳೆಸುತ್ತಾ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ಮಂದೆಗಳಿಗೋಸ್ಕರ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಈ ಕಾರಣ ಆ ಸ್ಥಳಕ್ಕೆ ‘ಸುಕ್ಕೋತ್’ ಎಂದು ಹೆಸರಾಯಿತು.
18 : ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದು ಕಾನಾನ್ ನಾಡಿನ ಶೆಕೆಮ್ ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಿದನು. ಆ ಪಟ್ಟಣದ ಮುಂದೆಯೇ ತನ್ನ ಗುಡಾರಗಳನ್ನು ಹಾಕಿಸಿಕೊಂಡನು.
19 : ಗುಡಾರಹಾಕಿಸಿದ ಭೂಮಿಯನ್ನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳಿಗೆ ನೂರು ವರಹಗಳನ್ನು ಕೊಟ್ಟು ಅವರಿಂದ ಕೊಂಡುಕೊಂಡನು.
20 : ಅಲ್ಲೇ ಒಂದು ಬಲಿಪೀಠವನ್ನು ಕಟ್ಟಿಸಿ ಅದಕ್ಕೆ ‘ಏಲ್-ಏಲೋಹೆ-ಇಸ್ರಯೇಲ್’ ಎಂದು ಹೆಸರಿಟ್ಟನು.

Holydivine