Genesis - Chapter 42
Holy Bible

1 : ಈಜಿಪ್ಟಿನಲ್ಲಿ ದವಸಧಾನ್ಯ ದೊರಕುತ್ತದೆ ಎಂಬ ಸಮಾಚಾರ ಯಕೋಬನಿಗೆ ಮುಟ್ಟಿತು. ಅವನು ತನ್ನ ಮಕ್ಕಳಿಗೆ, “ನೀವು ಮುಖಮುಖ ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ.
2 : ಈಜಿಪ್ಟಿನಲ್ಲಿ ದವಸಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ, ಬೇಕಾದ ದವಸವನ್ನು ಕೊಂಡುಕೊಂಡು ಬನ್ನಿ,” ಎಂದು ಹೇಳಿದನು.
3 : ಜೋಸೆಫನ ಹತ್ತು ಮಂದಿ ಅಣ್ಣಂದಿರು ಧಾನ್ಯವನ್ನು ತರುವುದಕ್ಕಾಗಿ ಈಜಿಪ್ಟ್ ದೇಶಕ್ಕೆ ಹೊರಟರು.
4 : ಆದರೆ ಜೋಸೆಫನ ಒಡಹುಟ್ಟಿದ ತಮ್ಮನಾದ ಬೆನ್ಯಾವಿೂನನನ್ನು ಯಕೋಬನು ಅವರ ಸಂಗಡ ಕಳಿಸಲಿಲ್ಲ. ಏಕೆಂದರೆ, ಅವನಿಗೆ ಏನಾದರೂ ಆಪತ್ತು ಒದಗೀತೆಂಬ ಹೆದರಿಕೆ ಅವನದು.
5 : ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು.
6 : ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ. ಇಂತಿರಲು ಅವನ ಅಣ್ಣಂದಿರು ಬಂದು ಅವನ ಮುಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು.
7 : ಜೋಸೆಫನು ಅವರನ್ನು ನೋಡಿದ ಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುನುಡಿಯಿಂದ, “ನೀವು ಎಲ್ಲಿಯವರು?” ಎಂದು ಕೇಳಿದನು. ಅವರು, “ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು,” ಎಂದು ಹೇಳಿದರು.
8 : ಅಣ್ಣಂದಿರ ಗುರುತು ಜೋಸೆಫನಿಗೆ ತಿಳಿಯಿತಾದರೂ ಅವನ ಗುರುತು ಅವರಿಗೆ ತಿಳಿಯದೆ ಹೋಯಿತು.
9 : ಅವರ ವಿಷಯವಾಗಿ ತಾನು ಕಂಡಿದ್ದ ಕನಸುಗಳನ್ನು ಜೋಸೆಫನು ನೆನಪಿಗೆ ತಂದುಕೊಂಡನು. ಅವರನ್ನು ನೋಡಿ, “ನೀವು ಗೂಢಚಾರರು; ನಮ್ಮ ದೇಶದ ದುರ್ಬಲ ಸ್ಥಳಗಳನ್ನು ಪತ್ತೆಹಚ್ಚುವುದಕ್ಕಾಗಿ ಬಂದವರು,” ಎಂದನು.
10 : ಅದಕ್ಕೆ ಅವರು, “ಇಲ್ಲ, ಒಡೆಯಾ, ತಮ್ಮ ಸೇವಕರಾದ ನಾವು ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ಬಂದಿದ್ದೇವೆ.
11 : ನಾವೆಲ್ಲರು ಒಬ್ಬ ತಂದೆಯ ಮಕ್ಕಳು; ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ,” ಎಂದರು.
12 : ಜೋಸೆಫನು ಅವರಿಗೆ, “ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವುದಕ್ಕೆ ಬಂದಿದ್ದೀರಿ,” ಎಂದನು.
13 : ಅದಕ್ಕೆ ಅವರು, “ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು; ಕಾನಾನ್ ನಾಡಿನವರು, ಒಬ್ಬ ತಂದೆಯ ಮಕ್ಕಳು; ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲೇ ಇದ್ದಾನೆ; ಒಬ್ಬನು ಇಲ್ಲವಾದನು,” ಎಂದರು.
14 : ಜೋಸೆಫನು ಅವರಿಗೆ, “ನಾನು ಈಗಾಗಲೆ ಹೇಳಿದಂತೆ ನೀವು ಗೂಢಚಾರರೇ,
15 : ಇದು ನಿಜವೋ ಸುಳ್ಳೋ ಎಂದು ಗೊತ್ತಾಗಬೇಕಾದರೆ ನೀವು ನಿಮ್ಮ ತಮ್ಮನನ್ನು ಬರಮಾಡಬೇಕು. ಅವನು ಬಂದ ಹೊರತು, ಫರೋಹನ ಜೀವದಾಣೆ, ನೀವು ಇಲ್ಲಿಂದ ಹೊರಟುಹೋಗಕೂಡದು.
16 : ಅವನನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳಿಸಿರಿ. ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇರಿಸುತ್ತೇನೆ. ಹೀಗೆ ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ,” ಎಂದು ಹೇಳಿ,
17 : ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಲ್ಲಿ ಇರಿಸಿದನು.
18 : ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, “ನಾನು ದೇವರಲ್ಲಿ ಭಯಭಕ್ತಿ ಯುಳ್ಳವನು; ನಿಮಗೆ ಜೀವದ ಮೇಲೆ ಆಶೆ ಇದ್ದರೆ ನಾನು ಹೇಳಿದಂತೆ ಮಾಡಿ;
19 : ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯವನ್ನು ತೆಗೆದುಕೊಂಡು ಹೋಗಿ.
20 : ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ. ಆಗ ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು.
21 : ಆಗ ಅವರು ತಮ್ಮ ತಮ್ಮೊಳಗೆ, “ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿ ಬೇಡಿಕೊಂಡ. ಅವನ ಪ್ರಾಣ ಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ. ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡು ಇದ್ದೇವೆ,” ಎಂದು ಮಾತಾಡಿಕೊಂಡರು.
22 : ಅಂತೆಯೇ ರೂಬೇನನು, “‘ಆ ಹುಡುಗನಿಗೆ ಯಾವ ಕೇಡೂ ಮಾಡಬೇಡಿ’ ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆ ಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ,” ಎಂದ.
23 : ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನೆಸಲಿಲ್ಲ.
24 : ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರೆಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಅವನಿಗೆ ಬೇಡಿಹಾಕಿಸಿದ.
25 : ಇದಾದ ಬಳಿಕ ಜೋಸೆಫನು ತನ್ನ ಆಳುಗಳಿಗೆ, “ಆ ಜನರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ಅದರಲ್ಲಿ ಇಟ್ಟುಬಿಡಿ. ಅವರ ಪ್ರಯಾಣಕ್ಕೆ ಬೇಕಾದ ಆಹಾರವನ್ನು ಕೊಟ್ಟು ಕಳಿಸಿರಿ,” ಎಂದು ಅಪ್ಪಣೆ ಮಾಡಿದ. ಆಳುಗಳು ಅದರಂತೆಯೆ ಮಾಡಿದರು.
26 : ಅಣ್ಣಂದಿರು ತಾವು ಕೊಂಡುಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟರು.
27 : ರಾತ್ರಿಗೆ ಒಂದು ಚಾವಡಿಯಲ್ಲಿ ಇಳಿದುಕೊಂಡರು. ಅವರಲ್ಲಿ ಒಬ್ಬನು ತನ್ನ ಕತ್ತೆಗೆ ಧಾನ್ಯಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದನು. ತಾನು ತಂದಿದ್ದ ಹಣ ಅದರ ಬಾಯಲ್ಲೆ ಇತ್ತು.
28 : “ನಾನು ಕೊಟ್ಟ ಹಣ ನನಗೆ ವಾಪಸ್ಸಾಗಿದೆ; ಇಗೋ, ನನ್ನ ಚೀಲದಲ್ಲಿದೆ,” ಎಂದು ತನ್ನ ಅಣ್ಣತಮ್ಮಂದಿರಿಗೆ ಹೇಳಿದ. ಅವರು ಕಕ್ಕಾಬಿಕ್ಕಿಯಾಗಿ, ಒಬ್ಬರನ್ನೊಬ್ಬರು ಬೆರಗಿನಿಂದ ನೋಡುತ್ತಾ, “ನಮಗೇಕೆ ದೇವರು ಹೀಗೆ ಮಾಡಿದ್ದಾರೆ?” ಎಂದುಕೊಂಡರು.
29 : ಕಾನಾನ್ ನಾಡನ್ನು ಅವರು ತಲುಪಿದರು. ತಮ್ಮ ತಂದೆಯ ಬಳಿಗೆ ಬಂದು ನಡೆದುದೆಲ್ಲವನ್ನು ವರದಿಮಾಡಿದರು.
30 : “ಆ ದೇಶಾಧಿಪತಿ ನಮ್ಮೊಡನೆ ಗಡುಸಾಗಿ ಮಾತಾಡಿದ; ನಮ್ಮನ್ನು ಗೂಢಚಾರರೆಂದು ಕರೆದ.
31 : ನಾವು ಅವನಿಗೆ, ‘ನಾವು ಸತ್ಯವಂತರೇ ಹೊರತು ಗೂಢಚಾರರೇನು ಅಲ್ಲ,
32 : ನಾವು ಒಬ್ಬ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರು; ನಮ್ಮಲ್ಲಿ ಒಬ್ಬನು ಇಲ್ಲವಾದ. ಚಿಕ್ಕವನೋ ಈಗ ಕಾನಾನ್ ನಾಡಿನಲ್ಲಿ ನಮ್ಮ ತಂದೆಯ ಬಳಿಯಲ್ಲಿದ್ದಾನೆ’ ಎಂದು ಹೇಳಿದೆವು.
33 : ಅದಕ್ಕೆ ಆ ದೇಶಾಧಿಪತಿ, ‘ನೀವು ಸತ್ಯವಂತರೋ ಇಲ್ಲವೋ ಎಂಬುದು ಗೊತ್ತಾಗುವುದಕ್ಕಾಗಿ ನಿಮ್ಮಲ್ಲಿ ಒಬ್ಬನನ್ನು ನನ್ನ ಬಳಿಯಲ್ಲೆ ಬಿಟ್ಟು ಹೋಗಿ; ನಿಮ್ಮ ಕುಟುಂಬದವರ ಕ್ಷಾಮ ನಿವಾರಣೆಗೆ ಬೇಕಾದುದನ್ನು ತೆಗೆದುಕೊಂಡು ಹೋಗಬಹುದು.
34 : ಆದರೆ ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನೀವು ಗೂಢಚಾರರಲ್ಲ, ಸತ್ಯವಂತರೇ ಎಂದು ತಿಳಿದುಕೊಳ್ಳುತ್ತೇನೆ; ನಿಮ್ಮ ಅಣ್ಣನನ್ನು ಬಿಡುಗಡೆ ಮಾಡುತ್ತೇನೆ ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡೆಸಬಹುದು,’ ಎಂದು ಹೇಳಿದ.
35 : ಅವರು ತಮ್ಮ ತಮ್ಮ ಚೀಲವನ್ನು ಬಿಚ್ಚಿನೋಡಿದಾಗ ಪ್ರತಿಯೊಬ್ಬನ ಚೀಲದಲ್ಲೂ ಅವನವನ ಹಣದ ಗಂಟು ಸಿಕ್ಕಿತು. ಆ ಗಂಟುಗಳನ್ನು ಕಂಡಾಗ ಅವರೂ ಅವರ ತಂದೆಯೂ ಚಕಿತರಾದರು.
36 : ಆಗ ಅವರ ತಂದೆ ಯಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಜೋಸೆಫನು ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯವಿೂನನನ್ನೂ ಕರೆದುಕೊಂಡು ಹೋಗಬೇಕೆಂದಿದ್ದೀರಿ. ಈ ಕಷ್ಟ ದುಃಖವೆಲ್ಲ ನನ್ನ ತಲೆಯ ಮೇಲೆ ಬಂದೆರಗಿದೆ!” ಎಂದನು.
37 : ಅದಕ್ಕೆ ರೂಬೇನನು, “ನಾನು ಈ ಹುಡುಗನನ್ನು ನಿಮಗೆ ಪುನಃ ತಂದೊಪ್ಪಿಸುತ್ತೇನೆ; ಇಲ್ಲದೆಹೋದರೆ ನನ್ನಿಬ್ಬರು ಗಂಡು ಮಕ್ಕಳನ್ನು ಕೊಂದುಹಾಕಬಹುದು. ಇವನನ್ನು ನನ್ನ ವಶಕ್ಕೆ ಕೊಡಿ, ನಾನು ತಪ್ಪದೆ ಇವನನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ,” ಎಂದು ಹೇಳಿದ.
38 : ಯಕೋಬನು ಅವರಿಗೆ, “ನನ್ನ ಮಗ ನಿಮ್ಮ ಸಂಗಡ ಹೋಗಬಾರದು. ಇವನ ಒಡಹುಟ್ಟಿದ ಅವನು ಸತ್ತುಹೋದ, ಇವನೊಬ್ಬನೇ ಉಳಿದು ಇದ್ದಾನೆ, ದಾರಿಯಲ್ಲಿ ಇವನಿಗೇನಾದರೂ ಆಪತ್ತು ಸಂಭವಿಸಬಹುದು. ಆಗ, ನರೆಕೂದಲಿನ ಈ ಮುದುಕ ದುಃಖದಿಂದಲೆ ಸಮಾಧಿಸೇರಲು ನೀವೇ ಕಾರಣರಾಗುತ್ತೀರಿ,” ಎಂದು ಹೇಳಿದ.

Holydivine