Genesis - Chapter 48
Holy Bible

1 : ಕೆಲವು ಕಾಲವಾದ ಮೇಲೆ, “ತಂದೆ ಬಹಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ,” ಎಂಬ ಸುದ್ಧಿ ಜೋಸೆಫನಿಗೆ ಬಂದಿತು. ಅವನು ಮನಸ್ಸೆ ಮತ್ತು ಎಫ್ರಯಿಮ್ ಎಂಬ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತನ್ನ ತಂದೆಯ ಬಳಿಗೆ ಬಂದನು.
2 : “ನಿಮ್ಮ ಮಗ ಜೋಸೆಫನು ಬಂದಿದ್ದಾನೆ,” ಎಂದು ಯಕೋಬನಿಗೆ ತಿಳಿಸಿದಾಗ ಅವನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.
3 : ಅವನು ಜೋಸೆಫನಿಗೆ, “ಸರ್ವವಲ್ಲಭರಾದ ದೇವರು ಕಾನಾನ್ ನಾಡಿನ ಲೂಜಿನಲ್ಲಿ ನನಗೆ ದರ್ಶನಕೊಟ್ಟು, ಆಶೀರ್ವದಿಸಿ -
4 : ‘ನಾನು ನಿನ್ನನ್ನು ಫಲಪ್ರದನನ್ನಾಗಿ ಮಾಡಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು; ಅನೇಕ ಜನರಿಗೆ ನಿನ್ನನ್ನು ಮೂಲಪುರುಷನನ್ನಾಗಿ ಮಾಡುವೆನು; ನಿನ್ನ ತರುವಾಯ ನಿನ್ನ ಸಂತತಿಗೆ ಈ ನಾಡನ್ನು ಶಾಶ್ವತ ಸೊತ್ತನ್ನಾಗಿ ಕೊಡುವೆನು,’ ಎಂದು ಹೇಳಿದರು.
5 : “ನಾನು ನಿನ್ನ ಬಳಿಗೆ ಈಜಿಪ್ಟ್ ದೇಶಕ್ಕೆ ಬರುವುದಕ್ಕೆ ಮುಂಚೆ ಇಲ್ಲಿ ಹುಟ್ಟಿದ್ದ ನಿನ್ನಿಬ್ಬರು ಮಕ್ಕಳು ನನ್ನ ಮಕ್ಕಳಾಗಬೇಕು. ರೂಬೇನ್ ಮತ್ತು ಸಿಮೆಯೋನ್ ನನ್ನ ಮಕ್ಕಳಾಗಿರುವಂತೆಯೇ ಎಫ್ರಯಿಮ್ ಮತ್ತು ಮನಸ್ಸೆ ನನ್ನ ಮಕ್ಕಳಾಗಿರಲಿ.
6 : ಅವರ ತರುವಾಯ ನೀನು ಪಡೆದ ಮಕ್ಕಳು ನಿನ್ನವರಾಗಿರಲಿ. ಅವರು ತಮ್ಮ ಅಣ್ಣಂದಿರ ಸೊತ್ತಿಗೆ ಬಾಧ್ಯತೆ ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
7 : ಏಕೆಂದರೆ ನಿಮ್ಮ ತಾಯಿ ರಾಖೇಲಳು, ನಾನು ಮೆಸಪೊಟೇಮಿಯಾದಿಂದ ಬರುವಾಗ, ಕಾನಾನ್ ನಾಡಿನಲ್ಲಿ ಎಫ್ರಾತನ್ನು ಸೇರುವುದಕ್ಕೆ ಇನ್ನು ಸ್ವಲ್ಪ ದೂರ ಇದ್ದಾಗಲೆ ದಾರಿಯಲ್ಲಿ ಸತ್ತು ನನ್ನನ್ನು ಅಗಲಿ ಹೋದಳು. ಈಗ ಬೆತ್ಲೆಹೇಮ್ ಎನಿಸಿಕೊಳ್ಳುವ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಆಕೆಯನ್ನು ಸಮಾಧಿಮಾಡಿದೆ,” ಎಂದು ಹೇಳಿದನು.
8 : ಯಕೋಬನು ಜೋಸೆಫನ ಮಕ್ಕಳನ್ನು ನೋಡಿ “ಇವರು ಯಾರು?” ಎಂದು ಕೇಳಿದನು.
9 : ಅದಕ್ಕೆ ಜೋಸೆಫನು “ಈ ದೇಶದಲ್ಲಿ ದೇವರು ನನಗೆ ಅನುಗ್ರಹಿಸಿದ ಮಕ್ಕಳು,” ಎಂದನು. ಆಗ ತಂದೆ ಯಕೋಬನು, “ಇವರನ್ನು ನಾನು ಆಶೀರ್ವದಿಸುತ್ತೇನೆ; ನನ್ನ ಹತ್ತಿರಕ್ಕೆ ಕರೆದುಕೊಂಡು ಬಾ,” ಎಂದನು.
10 : ವೃದ್ಧಾಪ್ಯದ ನಿಮಿತ್ತ ಯಕೋಬನ ಕಣ್ಣು ಮೊಬ್ಬಾಗಿತ್ತು. ಜೋಸೆಫನು ಆ ಮಕ್ಕಳನ್ನು ಹತ್ತಿರಕ್ಕೆ ತಂದಾಗ ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು
11 : ಅನಂತರ ಜೋಸೆಫನಿಗೆ, “ನಿನ್ನ ಮುಖವನ್ನು ಮತ್ತೆ ನೋಡುವೆನೆಂದು ನಾನು ನೆನಸಿರಲಿಲ್ಲ. ಈಗ ನಿನ್ನನ್ನು ಮಾತ್ರವಲ್ಲ, ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾರೆ!” ಎಂದನು.
12 : ಆಗ ಜೋಸೆಫನು ತಂದೆಯ ಮಡಲಿನಿಂದ ತನ್ನ ಮಕ್ಕಳನ್ನು ಎತ್ತಿಕೊಂಡು ತಂದೆಗೆ ನೆಲದ ತನಕ ಬಾಗಿ ನಮಸ್ಕರಿಸಿದನು
13 : ತರುವಾಯ ಜೋಸೆಫನು ಎಫ್ರಯಿಮನನ್ನು ತನ್ನ ಬಲಕ್ಕೆ ಯಕೋಬನ ಎಡಗೈಗೆದುರಾಗಿ ಮತ್ತು ಮನಸ್ಸೆಯನ್ನು ತನ್ನ ಎಡಕ್ಕೆ, ಯಕೋಬನ ಬಲಗೈಗೆದುರಾಗಿ ತಂದೆಯ ಮುಂದೆ ನಿಲ್ಲಿಸಿದನು.
14 : ಮನಸ್ಸೆಯು ಜೇಷ್ಠಮಗನಾಗಿದ್ದರೂ ಯಕೋಬನು ತನ್ನ ಕೈಗಳನ್ನು ಅಡ್ಡಡ್ಡವಾಗಿ ಚಾಚಿ ಕಿರಿಯವನಾದ ಎಫ್ರಯಿಮನ ತಲೆಯ ಮೇಲೆ ಬಲಗೈಯನ್ನು, ಮನಸ್ಸೆಯ ತಲೆಯ ಮೇಲೆ ಎಡಗೈಯನ್ನು ಇಟ್ಟು,
15 : ಜೋಸೆಫನನ್ನು ಹೀಗೆಂದು ಆಶೀರ್ವದಿಸಿದನು: “ನನ್ನ ಪಿತೃಗಳಾದ ಅಬ್ರಹಾಮ್, ಇಸಾಕರು ಯಾವ ದೇವರ ಸಮ್ಮುಖದಲ್ಲಿ ನಡೆದುಕೊಂಡರೋ ಆ ದೇವರು, ಚಿಕ್ಕಂದಿನಿಂದ ಇಂದಿನವರೆಗೆ ನನ್ನನ್ನು ಪರಿಪಾಲಿಸಿಕೊಂಡು ಬಂದ ಆ ದೇವರು,
16 : ಸಕಲ ಆಪತ್ತು ಕೇಡುಗಳಿಂದ ನನ್ನನ್ನು ಕಾಪಾಡಿಕೊಂಡು ಬಂದ ಆ ದೂತನು, ಈ ಹುಡುಗರನ್ನು ಆಶೀರ್ವದಿಸಲಿ ಅವರ ಮುಖಾಂತರ ನನ್ನ ಹೆಸರೂ ನನ್ನ ಪಿತೃಗಳಾದ ಅಬ್ರಹಾಮ್ - ಇಸಾಕರ ಹೆಸರೂ ಊರ್ಜಿತಗೊಳ್ಳಲಿ; ಧರೆಯಲ್ಲಿ ಇವರು ದೊಡ್ಡ ಜನಸ್ತೋಮವಾಗಿ ಬೆಳೆಯಲಿ!”
17 : ತನ್ನ ತಂದೆ ಬಲಗೈಯನ್ನು ಎಫ್ರಯಿಮನ ತಲೆಯ ಮೇಲೆ ಇಟ್ಟದ್ದು ಜೋಸೆಪನಿಗೆ ಹಿಡಿಸಲಿಲ್ಲ. ಅವನು ಆ ಕೈಯನ್ನು ಹಿಡಿದು ಎಫ್ರಯಿಮನ ತಲೆಯಿಂದ ಎತ್ತಿ ಮನಸ್ಸೆಯ ತಲೆಯ ಮೇಲೆ ಇಡುವಂತೆ ತಂದೆಗೆ,
18 : “ಹಾಗಲ್ಲ ಅಪ್ಪಾ, ಇವನೇ ಜೇಷ್ಠ ಪುತ್ರ; ಬಲಗೈಯನ್ನು ಇವನ ತಲೆಯ ಮೇಲೆ ಇಡು”, ಎಂದು ಹೇಳಿದ.
19 : ಆದರೆ ತಂದೆ ಅದಕ್ಕೆ ಒಪ್ಪದೆ, “ಗೊತ್ತು ಮಗನೇ, ನನಗೆ ಗೊತ್ತು; ಇವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವುದು; ಇವನೂ ಬಲಿಷ್ಠನಾಗುವನು. ಆದರೆ ತಮ್ಮನು ಇವನಿಗಿಂತ ಬಲಿಷ್ಠನಾಗುವನು. ಅವನಿಂದ ರಾಷ್ಟ್ರಗಳ ಸಮೂಹವೆ ಉತ್ಪತ್ತಿಯಾಗುವುದು,” ಎಂದು ಹೇಳಿದನು.
20 : ಆ ದಿನ ಅವರನ್ನು ಆಶೀರ್ವದಿಸುತ್ತಾ ಹೀಗೆಂದನು: “ಎಫ್ರಯಿಮ್ - ಮನಸ್ಸೆಯಂತೆ ನಿಮ್ಮನ್ನೂ ಅಭಿವೃದ್ಧಿಗೊಳಿಸಲಿ ದೇವರು! ಹೀಗೆ ನಿಮ್ಮ ಹೆಸರನ್ನು ಉಚ್ಚರಿಸುತ್ತಾ ಇತರರನ್ನು ಆಶೀರ್ವದಿಸುವರು ಇಸ್ರಯೇಲರು”. ಈ ರೀತಿಯಾಗಿ ಅವನು ಎಫ್ರಯಿಮನನ್ನು ಮನಸ್ಸೆಗಿಂತ ಮುಂದಿಟ್ಟನು.
21 : ಬಳಿಕ ಯಕೋಬನು ಜೋಸೆಫನಿಗೆ, “ನನಗೆ ಮರಣ ಸವಿೂಪಿಸಿದೆ; ಆದರೆ ದೇವರು ನಿಮ್ಮೊಂದಿಗಿದ್ದು ನಿಮ್ಮನ್ನು ಪಿತೃಗಳ ನಾಡಿಗೆ ಮರಳಿ ಬರಮಾಡುವರು.
22 : ಇದಲ್ಲದೆ, ಕತ್ತಿ - ಬಿಲ್ಲುಗಳಿಂದ ನಾನು ಅಮೋರಿಯರ ವಶದಿಂದ ಪಡೆದ ಬೆಟ್ಟದ ತಪ್ಪಲನ್ನು, ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ, ನಿನಗೆ ಕೊಟ್ಟಿದ್ದೇನೆ,” ಎಂದು ಹೇಳಿದನು.

Holydivine