Genesis - Chapter 45
Holy Bible

1 : ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನು ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ.
2 : ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು.
3 : ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, “ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?” ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು.
4 : ಜೋಸೆಫನು, “ಹತ್ತಿರಕ್ಕೆ ಬನ್ನಿ” ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, “ಈಜಿಪ್ಟ್ ದೇಶಕ್ಕೆ ಹೋಗಲಿ” ಎಂದು ನೀವು ಮಾರಿಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ.
5 : ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವ ರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು.
6 : ದೇಶಕ್ಕೆ ಬರಗಾಲ ಬಂದು ಈಗಾಗಲೇ ಎರಡು ವರ್ಷಗಳಾದವು. ಇನ್ನೂ ಐದು ವರ್ಷಗಳ ಪರ್ಯಂತರ ಬಿತ್ತುವುದಕ್ಕಾಗಲಿ ಕೊಯ್ಯುವುದಕ್ಕಾಗಲಿ ಅವಕಾಶವಿಲ್ಲ.
7 : ನಿಮ್ಮ ಜನ ಧರೆಯಲ್ಲಿ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಅಭಿವೃದ್ಧಿಯಾಗುವಂತೆಯೂ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಕಳಿಸಿದರು.
8 : ನನ್ನನ್ನು ಇಲ್ಲಿಗೆ ಕಳಿಸಿದವರು ನೀವಲ್ಲ, ದೇವರೇ. ಅವರು ನನ್ನನ್ನು ಫರೋಹನಿಗೆ ಮಂತ್ರಿಯಾಗಿಯೂ ಅವರ ಆಸ್ಥಾನಕ್ಕೆ ಅಧಿಪತಿಯಾಗಿಯೂ ಈಜಿಪ್ಟ್ ದೇಶಕ್ಕೆ ಸರ್ವಾಧಿಕಾರಿಯಾಗಿಯೂ ಮಾಡಿದ್ದಾರೆ.
9 : “ನೀವು ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವರಿಗೆ, ನಿಮ್ಮ ಮಗ ಜೋಸೆಫ್ ಹೀಗೆನ್ನುತ್ತಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆ ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದಾರೆ. ನೀವು ತಡಮಾಡದೆ ನನ್ನ ಬಳಿಗೆ ಬರಬೇಕು.
10 : ಗೋಷೆನ್ ಪ್ರಾಂತ್ಯದಲ್ಲಿ ನನ್ನ ಬಳಿಯಲ್ಲೇ ನೀವೂ ನಿಮ್ಮ ಮಕ್ಕಳೂ ಮೊಮ್ಮಕ್ಕಳೂ ದನ, ಕುರಿ ಮೊದಲಾದ ಆಸ್ತಿಪಾಸ್ತಿಗಳ ಸಮೇತ ವಾಸಮಾಡಬಹುದು.
11 : ಬರಗಾಲ ತೀರುವುದಕ್ಕೆ ಇನ್ನೂ ಐದು ವರ್ಷ ಕಳೆಯಬೇಕಾಗಿದೆ. ಆದುದರಿಂದ ನಿಮಗೂ ನಿಮ್ಮ ಕುಟುಂಬಕ್ಕೂ ನಿಮಗಿರುವ ಸಮಸ್ತಕ್ಕೂ ಬಡತನ ತಟ್ಟದಂತೆ ನಾನು ನಿಮ್ಮನ್ನು ಪೋಷಿಸುತ್ತೇನೆ’, ಎಂದು ಹೇಳಿರುವುದಾಗಿ ತಿಳಿಸಿರಿ.
12 : “ನಾನೇ ಖುದ್ದಾಗಿ ನಿಮ್ಮ ಸಂಗಡ ಮಾತಾಡಿದ್ದೇನೆ; ಅದಕ್ಕೆ ನೀವೂ ಸಾಕ್ಷಿ; ನನ್ನ ಒಡಹುಟ್ಟಿದ ಬೆನ್ಯಾವಿೂನನೂ ಸಾಕ್ಷಿ;
13 : ಈಜಿಪ್ಟ್ ದೇಶದಲ್ಲಿ ನನಗಿರುವ ಘನತೆ ಗೌರವವನ್ನೂ ನೀವು ಕಂಡದ್ದೆಲ್ಲವನ್ನೂ ತಂದೆಗೆ ತಿಳಿಸಿ, ಬೇಗನೆ ಅವರನ್ನು ಇಲ್ಲಿಗೆ ಕರೆದುಕೊಂಡು ಬನ್ನಿ,” ಎಂದು ಹೇಳಿದನು.
14 : ಬಳಿಕ ಜೋಸೆಫನು ತನ್ನ ತಮ್ಮ ಬೆನ್ಯಾವಿೂನನ ಕೊರಳನ್ನು ಅಪ್ಪಿಕೊಂಡು ಅತ್ತನು.
15 : ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟನು. ತರುವಾಯ ಅವರು ಅವನ ಸಂಗಡ ಮಾತನಾಡತೊಡಗಿದರು.
16 : ಜೋಸೆಫನ ಅಣ್ಣತಮ್ಮಂದಿರು ಬಂದಿರುವ ಸಮಾಚಾರ ಫರೋಹನ ಅರಮನೆಗೆ ತಲುಪಿತು. ಫರೋಹನೂ ಅವನ ಪರಿವಾರದವರೂ ಅದನ್ನು ಕೇಳಿ ಸಂತೋಷಪಟ್ಟರು.
17 : ಫರೋಹನು ಜೋಸೆಫನನ್ನು ಕರೆಸಿ, “ನೀನು ನಿನ್ನ ಸಹೋದರರಿಗೆ ತಿಳಿಸಬೇಕಾದ ನನ್ನ ಆಜ್ಞೆ ಇದು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್ ನಾಡಿಗೆ ಹೋಗಿ, ಅಲ್ಲಿಂದ
18 : ನಿಮ್ಮ ತಂದೆಯನ್ನೂ ಕುಟುಂಬದವರನ್ನೂ ನನ್ನ ಬಳಿಗೆ ಕರೆದುಕೊಂಡು ಬರತಕ್ಕದ್ದು. ಈಜಿಪ್ಟ್ ದೇಶದಲ್ಲಿ ನಿಮಗೆ ಅತ್ಯುತ್ತಮವಾದ ಭೂಮಿಯನ್ನು ಕೊಡುವೆನು. ನೀವು ಈ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’
19 : ನಿನ್ನ ಸಹೋದರರಿಗೆ ಈ ಆಜ್ಞೆಯನ್ನೂ ತಿಳಿಸು: ‘ನೀವು ನಿಮ್ಮ ಮಡದಿ ಮಕ್ಕಳನ್ನು ಕರೆದುತರಲು ಈಜಿಪ್ಟ್ ದೇಶದ ಬಂಡಿಗಳನ್ನು ತೆಗೆದುಕೊಂಡು ಹೋಗಿರಿ; ನಿಮ್ಮ ತಂದೆಯನ್ನು ತಂದು ಸೇರಿಸಿರಿ.
20 : ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಚಿಂತಿಸಬೇಕಾಗಿಲ್ಲ. ಈಜಿಪ್ಟ್ ದೇಶದ ಅತ್ಯುತ್ತಮವಾದುವುಗಳು ನಿಮ್ಮದಾಗುವುವು’.”
21 : ಯಕೋಬನ ಮಕ್ಕಳು ಅದೇ ಮೇರೆಗೆ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಜೋಸೆಫನು ಅವರಿಗೆ ಬಂಡಿಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು.
22 : ಅದೂ ಅಲ್ಲದೆ, ಪ್ರತಿಯೊಬ್ಬನಿಗೂ ಶ್ರೇಷ್ಠವಾದ ಹೊಸ ಬಟ್ಟೆಗಳನ್ನು ಕೊಟ್ಟನು. ಬೆನ್ಯಾವಿೂನನಿಗಾದರೋ ಮುನ್ನೂರು ಬೆಳ್ಳಿನಾಣ್ಯಗಳನ್ನು ಹಾಗೂ ಐದು ಶ್ರೇಷ್ಠವಾದ ಹೊಸಬಟ್ಟೆಗಳನ್ನು ಕೊಟ್ಟನು.
23 : ತನ್ನ ತಂದೆಗೆ ಈಜಿಪ್ಟ್ ದೇಶದ ಒಳ್ಳೊಳ್ಳೆಯ ವಸ್ತುಗಳನ್ನೂ ಹತ್ತು ಗಂಡುಕತ್ತೆಗಳ ಮೇಲೆ ಹೇರಿಸಿದನು. ಅವನ ಪ್ರಯಾಣಕ್ಕೆ ಹತ್ತು ಹೆಣ್ಣುಕತ್ತೆಗಳ ಮೇಲೆ ದವಸಧಾನ್ಯಗಳನ್ನೂ ಇತರ ಆಹಾರ ಪದಾರ್ಥಗಳನ್ನೂ ಕಳಿಸಿಕೊಟ್ಟನು.
24 : ತನ್ನ ಅಣ್ಣ ತಮ್ಮಂದಿರಿಗೆ, “ದಾರಿಯಲ್ಲಿ ಜಗಳವಾಡಬೇಡಿ” ಎಂದು ಬುದ್ಧಿ ಹೇಳಿ, ಅವರನ್ನು ಬೀಳ್ಕೊಟ್ಟನು. ಅವರು ಹೊರಟುಹೋದರು.
25 : ಅವರು ಈಜಿಪ್ಟ್ ದೇಶವನ್ನು ಬಿಟ್ಟು ಕಾನಾನ್ ನಾಡನ್ನು ಸೇರಿದರು.
26 : ತಂದೆ ಯಕೋಬನ ಬಳಿಗೆ ಬಂದು, “ಜೋಸೆಫನು ಇನ್ನೂ ಜೀವದಿಂದಿದ್ದಾನೆ; ಅವನೇ ಈಜಿಪ್ಟ್ ದೇಶದ ಪ್ರಧಾನಮಂತ್ರಿ” ಎಂದು ಅರುಹಿದರು. ಅವನು ಅದನ್ನು ಕೇಳಿ ಸ್ತಬ್ಧನಾದ; ಅವರನ್ನು ನಂಬಲೇ ಇಲ್ಲ.
27 : ಆದರೆ ಜೋಸೆಫನು ಹೇಳಿಕಳಿಸಿದ ಎಲ್ಲ ಮಾತುಗಳನ್ನು ಕೇಳಿ, ತನ್ನ ಪ್ರಯಾಣಕ್ಕಾಗಿ ಅವನಿಂದ ಬಂದಿದ್ದ ಬಂಡಿಗಳನ್ನು ನೋಡಿ ಅವರ ತಂದೆ ಯಕೋಬನಿಗೆ ಹೊಸ ಜೀವ ಬಂದಿತು.
28 : ಕೊನೆಗೆ ಯಕೋಬನು, “ನನ್ನ ಮಗ ಜೋಸೆಫ್ ಜೀವದಿಂದಿದ್ದಾನೆ, ನನಗೆ ಅಷ್ಟೇ ಸಾಕು! ನಾನು ಸಾಯುವುದಕ್ಕೆ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.

Holydivine