Genesis - Chapter 21
Holy Bible

1 : ಸರ್ವೇಶ್ವರಸ್ವಾಮಿ ತಾವು ಹೇಳಿದ್ದಂತೆಯೇ ಸಾರಳಿಗೆ ನೆರವಾದರು. ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದರು.
2 : ಆಕೆ ಗರ್ಭಿಣಿಯಾಗಿ ಅಬ್ರಹಾಮನಿಂದ ಒಬ್ಬ ಮಗನನ್ನು ಹೆತ್ತಳು. ಅದೂ ಅಬ್ರಹಾಮನು ಮುದುಕನಾಗಿದ್ದಾಗ, ದೇವರು ಮೊದಲೇ ನಿರ್ಧರಿಸಿದ್ದ ಕಾಲಕ್ಕೆ ಹೆತ್ತಳು.
3 : ತನ್ನಿಂದ ಸಾರಳಲ್ಲಿ ಹುಟ್ಟಿದ ಆ ಮಗನಿಗೆ ಅಬ್ರಹಾಮನು ‘ಇಸಾಕ್’ ಎಂದು ಹೆಸರಿಟ್ಟನು.
4 : ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅವನಿಗೆ ಸುನ್ನತಿಮಾಡಿದನು.
5 : ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು.
6 : ಸಾರಳು ಇಂತೆಂದುಕೊಂಡಳು: “ತಂದಿಹನಿದೋ ಎನಗೊಂದು ‘ನಗು’ವನು ಆ ದೇವನು, ನಕ್ಕು ನಲಿವರೆನ್ನೊಡನೆ ಇದನ್ನು ಕೇಳುವವರೆಲ್ಲರು.”
7 : ಅದೂ ಅಲ್ಲದೆ: “ಈಪರಿ ಪೇಳುತ್ತಿದ್ದರಾರು ಅಬ್ರಹಾಮನಿಗೆ? ‘ಕುಡಿಸುವಳು ಸಾರಳೂ ಮೊಲೆ ಹಾಲನ್ನು ಮಕ್ಕಳಿಗೆ’? ಹೆತ್ತಿರುವೆ ನೋಡಿ ಮಗನನು ಮುಪ್ಪಿನಲು ಆತನಿಗೆ!”
8 : ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆ ಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು.
9 : ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು.
10 : ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕು ಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು.
11 : ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು.
12 : ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು.
13 : ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು.
14 : ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.
15 : ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು,
16 : ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು.
17 : ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು;
18 : ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು.
19 : ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು.
20 : ಹುಡುಗನ ಸಂಗಡ ದೇವರಿದ್ದರು.
21 : ಪಾರಾನಿನ ಅರಣ್ಯ ಅವನ ವಾಸಸ್ಥಳವಾಯಿತು. ಅವನ ತಾಯಿ ಈಜಿಪ್ಟಿನಿಂದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.
22 : ಅಬ್ರಹಾಮನಿಗೂ ಅಬೀಮೆಲೆಕನಿಗೂ ಆದ ಒಪ್ಪಂದ ಆ ದಿನಗಳಲ್ಲಿ ಅಬೀಮೆಲೆಕನು ತನ್ನ ಸೇನಾಪತಿಯಾದ ಫೀಕೋಲನ ಸಮೇತ ಅಬ್ರಹಾಮನ ಬಳಿಗೆ ಬಂದು, “ನೀನು ಮಾಡುವ ಕೆಲಸಕಾರ್ಯಗಳಲ್ಲೆಲ್ಲಾ ದೇವರು ನಿನ್ನ ಸಂಗಡ ಇದ್ದಾರೆ.
23 : ಆದುದರಿಂದ ನೀನು ಈ ಸ್ಥಳದಲ್ಲಿ ನನ್ನೊಂದಿಗೆ ಒಂದು ಒಪ್ಪಂದಕ್ಕೆ ಬರಬೇಕು: ಅದೇನೆಂದರೆ - ನನಗಾಗಲಿ ನನ್ನ ಪುತ್ರ ಪೌತ್ರರಿಗಾಗಲಿ ಏನೂ ಅನ್ಯಾಯ ಮಾಡಬಾರದು; ನಾನು ನಿನಗೆ ಒಳ್ಳೆಯದನ್ನೇ ಮಾಡಿದಂತೆ ನನಗೂ, ನೀನು ವಾಸಮಾಡುತ್ತಿರುವ ಈ ನಾಡಿಗೂ ಒಳ್ಳೆಯದನ್ನೇ ಮಾಡಬೇಕು. ಹೀಗೆ ಮಾಡುವುದಾಗಿ ದೇವರ ಮೇಲೆ ಪ್ರಮಾಣಮಾಡಬೇಕು,” ಎಂದು ಕೇಳಿಕೊಂಡನು.
24 : ಅದಕ್ಕೆ ಅಬ್ರಹಾಮನು, “ಹಾಗೆಯೇ ಪ್ರಮಾಣಮಾಡುತ್ತೇನೆ,” ಎಂದನು.
25 : ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲಾತ್ಕಾರದಿಂದ ಸ್ವಾಧೀನಪಡಿಸಿಕೊಂಡಿದ್ದರು.
26 : ಅಬೀಮೆಲೆಕನು, “ಈ ಕೃತ್ಯವನ್ನು ಮಾಡಿದವರು ಯಾರೆಂದು ನಾನರಿಯೆ; ನೀನೂ ನನಗೆ ತಿಳಿಸಲಿಲ್ಲ; ಇಲ್ಲಿಯವರೆಗೆ ನಾನು ಈ ಸಂಗತಿಯನ್ನು ಕೇಳಿಯೂ ಇಲ್ಲ,” ಎಂದನು.
27 : ಆಗ ಅಬ್ರಹಾಮನು ಅಬೀಮೆಲೆಕನಿಗೆ ದನಕುರಿಗಳನ್ನು ದಾನ ಮಾಡಿದನು. ಹೀಗೆ ಅವರಿಬ್ಬರು ಒಂದು ಒಪ್ಪಂದ ಮಾಡಿಕೊಂಡರು.
28 : ಆದರೆ ಅಬ್ರಹಾಮನು ಹಿಂಡಿನ ಏಳು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಿದನು.
29 : ಅಬೀಮೆಲೆಕನು, “ನೀನು ಪ್ರತ್ಯೇಕವಾಗಿರಿಸಿರುವ ಈ ಏಳು ಕುರಿಮರಿಗಳು ಏತಕ್ಕೆ?” ಎಂದು ವಿಚಾರಿಸಿದನು.
30 : ಅದಕ್ಕೆ ಅಬ್ರಹಾಮನು, “ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ಈ ಏಳು ಕುರಿಮರಿಗಳನ್ನು ನನ್ನ ಕೈಯಿಂದ ನೀನು ಸ್ವೀಕರಿಸಬೇಕು,” ಎಂದನು.
31 : ಹೀಗೆ ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದ ಕಾರಣ, ಆ ಸ್ಥಳಕ್ಕೆ ‘ಬೇರ್ಷೆಬ’ ಎಂದು ಹೆಸರಾಯಿತು.
32 : ಬೇರ್ಷೆಬದಲ್ಲಿ ಅವರು ಒಪ್ಪಂದಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಪತಿ ಫೀಕೋಲನು ಫಿಲಿಷ್ಟಿಯಕ್ಕೆ ಹಿಂದಿರುಗಿದರು.
33 : ಅಬ್ರಹಾಮನು ಆ ಬೇರ್ಷೆಬದಲ್ಲೇ ಒಂದು ಪಿಚುಲ ವೃಕ್ಷವನ್ನು ನೆಟ್ಟು ನಿತ್ಯದೇವರಾದ ಸರ್ವೇಶ್ವರಸ್ವಾಮಿಯ ನಾಮಸ್ಮರಣೆ ಮಾಡಿ, ಅಲ್ಲಿ ಆರಾಧನೆ ಮಾಡಿದನು.
34 : ಅಬ್ರಹಾಮನು ಫಿಲಿಷ್ಟಿಯರ ಆ ಪ್ರಾಂತ್ಯದಲ್ಲಿ ಬಹುಕಾಲ ಪ್ರವಾಸಿಯಾಗಿದ್ದನು.

Holydivine