Genesis - Chapter 31
Holy Bible

1 : ಲಾಬಾನನ ಮಕ್ಕಳು, “ನಮ್ಮ ತಂದೆಯ ಆಸ್ತಿಪಾಸ್ತಿಯೆಲ್ಲ ಯಕೋಬನ ಪಾಲಾಯಿತು. ನಮ್ಮ ತಂದೆಯ ಆಸ್ತಿಯಿಂದಲೇ ಅವನು ಇಷ್ಟು ಐಶ್ವರ್ಯವನ್ನು ಶೇಖರಿಸಿದ್ದು,” ಎಂದು ಆಡಿಕೊಂಡರು.
2 : ಇದಲ್ಲದೆ, ಯಕೋಬನ ಕಣ್ಣಿಗೆ ಲಾಬಾನನ ಮನೋಭಾವವು ಮೊದಲಿದ್ದಂತೆ ತೋರಲಿಲ್ಲ.
3 : ಆಗ ಸರ್ವೇಶ್ವರಸ್ವಾಮಿ ಅವನಿಗೆ, “ನಿನ್ನ ತಂದೆ ತಾತಂದಿರ ನಾಡಿಗೂ ನಿನ್ನ ಬಂಧು ಬಳಗದವರ ಬಳಿಗೂ ಹಿಂದಿರುಗು. ನಾನು ನಿನ್ನೊಂದಿಗೆ ಇರುತ್ತೇನೆ,” ಎಂದು ಹೇಳಿದರು.
4 : ಆದುದರಿಂದ ಯಕೋಬನು ರಾಖೇಲಳನ್ನು ಮತ್ತು ಲೇಯಳನ್ನು ತಾನು ಆಡುಕುರಿ ಮೇಯಿಸುತ್ತಿದ್ದ ಅಡವಿಗೆ ಕರೆಸಿದನು.
5 : ಅಲ್ಲಿ ಅವರಿಗೆ, “ನನ್ನ ವಿಷಯದಲ್ಲಿ ನಿಮ್ಮ ತಂದೆಯ ಮನೋಭಾವ ಮೊದಲಿದ್ದಂತೆ ಇಲ್ಲವೆಂದು ಕಂಡು ಬಂದಿದೆ. ಆದರೂ ನನ್ನ ತಂದೆಯ ದೇವರು ನನ್ನೊಂದಿಗೆ ಇದ್ದಾರೆ.
6 : ನಿಮಗೆ ತಿಳಿದಿರುವಂತೆ ನಾನು ನಿಮ್ಮ ತಂದೆಗೆ ಶಕ್ತಿವಿೂರಿ ಸೇವೆಸಲ್ಲಿಸಿದ್ದೇನೆ.
7 : ನಿಮ್ಮ ತಂದೆಯಾದರೋ ನನಗೆ ಮೋಸಮಾಡಿ ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿದ್ದಾರೆ. ಅವರಿಂದ ನನಗೆ ಕೇಡಾಗದಂತೆ ದೇವರೇ ನೋಡಿಕೊಂಡರು.
8 : ‘ಚುಕ್ಕೆಯುಳ್ಳವುಗಳನ್ನು ಮಾತ್ರ ನಿನ್ನ ಸಂಬಳಕ್ಕೆ ತೆಗೆದುಕೊ’, ಎಂದು ನಿಮ್ಮ ತಂದೆ ಹೇಳುವಾಗ ಹಿಂಡಿನ ಆಡುಕುರಿಗಳೆಲ್ಲ ಚುಕ್ಕೆಯುಳ್ಳ ಮರಿಗಳನ್ನೇ ಈದುವು. ‘ರೇಖೆಗಳಿರುವುವುಗಳನ್ನು ಮಾತ್ರ ಸಂಬಳಕ್ಕೆ ತೆಗೆದುಕೊ’, ಎಂದು ಹೇಳಿದಾಗ ಆಡುಕುರಿಗಳೆಲ್ಲವು ರೇಖೆಯುಳ್ಳ ಮರಿಗಳನ್ನೇ ಈದುವು.
9 : ಹೀಗೆ ದೇವರು ನಿಮ್ಮ ತಂದೆಯ ಆಡುಕುರಿಗಳನ್ನು ತೆಗೆದು ನನಗೆ ಕೊಟ್ಟರು.
10 : “ಆಡುಕುರಿಗಳು ಸಂಗಮ ಮಾಡುವ ಕಾಲದಲ್ಲಿ ನಾನೊಂದು ಕನಸನ್ನು ಕಂಡೆ. ಅದರಲ್ಲಿ ಕಣ್ಣೆತ್ತಿ ನೋಡುತ್ತಿದ್ದ ನನಗೆ ಮೇಕೆಗಳ ಮೇಲೆ ಹಾರಿದ ಹೋತಗಳೆಲ್ಲವು ರೇಖೆ, ಚುಕ್ಕೆ, ಮಚ್ಚೆಗಳುಳ್ಳವುಗಳಾಗಿಯೆ ಕಾಣಿಸಿದವು.
11 : ಆ ಕನಸಿನಲ್ಲಿ ದೇವದೂತನು, ‘ಯಕೋಬನೇ’ ಎಂದು ಕರೆದನು. ನಾನು, ‘ಇಗೋ, ಇದ್ದೇನೆ’, ಎಂದು ಹೇಳಿದೆ.
12 : ಆತ ನನಗೆ, ‘ಲಾಬಾನನು ನಿನ್ನ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ನಾನು ನೋಡಿದ್ದೇನೆ. ಆದುದರಿಂದಲೇ ಮೇಕೆಗಳ ಮೇಲೆ ಹಾರುವ ಹೋತಗಳೆಲ್ಲವು ರೇಖೆ, ಚುಕ್ಕೆ, ಮಚ್ಚೆಗಳುಳ್ಳವುಗಳಾಗಿವೆ, ಕಣ್ಣೆತ್ತಿನೋಡು.
13 : ಬೇತೇಲಿನಲ್ಲಿ ನಿನಗೆ ಕಾಣಿಸಿದ ದೇವರು ನಾನೇ. ಅಲ್ಲಿ ನೀನು ಕಲ್ಲಿನ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿ, ನನಗೆ ಹರಕೆ ಮಾಡಿಕೊಂಡೆಯಲ್ಲವೆ? ಈಗ ಎದ್ದು ಈ ನಾಡನ್ನು ಬಿಟ್ಟು ನೀನು ಹುಟ್ಟಿದ ನಾಡಿಗೆ ಹಿಂದಿರುಗಿ ಹೋಗು’ ಎಂದು ತಿಳಿಸಿದನು”, ಎಂದನು.
14 : ಅದಕ್ಕೆ ರಾಖೇಲಳು ಮತ್ತು ಲೇಯಳು, “ನಮ್ಮ ತಂದೆಯ ಮನೆಯಲ್ಲಿ ಇನ್ನು ನಮಗೆ ಪಾಲಾಗಲಿ, ಹಕ್ಕುಬಾಧ್ಯತೆಯಾಗಲಿ ಏನಿದೆ?
15 : ಅವರು ನಮ್ಮನ್ನು ಅನ್ಯರೆಂದೇ ಎಣಿಸುತ್ತಾರೆ; ನಮ್ಮನ್ನು ಮಾರಿ, ನಮ್ಮ ಮೂಲಕ ದೊರಕಿದ ಹಣವನ್ನು ಅವರೇ ನುಂಗಿಬಿಟ್ಟಿದ್ದಾರೆ.
16 : ದೇವರು ನಮ್ಮ ತಂದೆಯಿಂದ ಕಿತ್ತುಕೊಂಡ ಈ ಆಸ್ತಿಯೆಲ್ಲ ನಮ್ಮದಾಗಿದೆ, ನಮ್ಮ ಮಕ್ಕಳದಾಗಿದೆ. ಆದುದರಿಂದ ದೇವರು ನಿಮಗೆ ಹೇಳಿದಂತೆಯೇ ಮಾಡಿ,” ಎಂದು ಉತ್ತರಕೊಟ್ಟರು.
17 : ಅಂತೆಯೇ ಯಕೋಬನು ತನ್ನ ಮಕ್ಕಳನ್ನೂ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ ಹೊರಡಲು ಅಣಿಯಾದನು.
18 : ಮೆಸಪೊಟೇಮಿಯಾದಲ್ಲಿ ತಾನು ಗಳಿಸಿಕೊಂಡಿದ್ದ ಆಸ್ತಿಯನ್ನೆಲ್ಲ ತೆಗೆದುಕೊಂಡು, ಜಾನುವಾರುಗಳನ್ನೆಲ್ಲ ಅಟ್ಟಿಕೊಂಡು ಕಾನಾನ್ ನಾಡಿಗೆ, ತನ್ನ ತಂದೆ ಇಸಾಕನ ಬಳಿಗೆ ಹೊರಟನು.
19 : ಇತ್ತ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಲು ಹೋಗಿದ್ದನು. ಅದೇ ಸಮಯದಲ್ಲಿ ರಾಖೇಲಳು ತನ್ನ ತಂದೆಯ ಮನೆಯಲ್ಲಿದ್ದ ಕುಲದೈವಗಳ ವಿಗ್ರಹಗಳನ್ನು ಕದ್ದುಕೊಂಡಳು.
20 : ಯಕೋಬನೂ ಆರಾಮ್ಯನಾದ ಆ ಲಾಬಾನನಿಗೆ ತಾನು ಹೋಗುತ್ತಿದ್ದೇನೆಂದು ತಿಳಿಸದೆ ವಂಚಿಸಿ ಓಡಿಹೋದನು.
21 : ಹೀಗೆ ಅವನು ತನ್ನ ಆಸ್ತಿಪಾಸ್ತಿಯೊಂದಿಗೆ ಓಡಿಹೋಗಿ ಯೂಫ್ರೆಟಿಸ್ ಮಹಾನದಿಯನ್ನು ದಾಟಿ ಗಿಲ್ಯಾದ್ ಎಂಬ ಗುಡ್ಡಗಾಡಿನ ದಾರಿಯನ್ನು ಹಿಡಿದನು.
22 : ಯಕೋಬನು ಓಡಿಹೋದ ಸುದ್ದಿ ಲಾಬಾನನಿಗೆ ಮೂರನೆಯ ದಿನ ತಿಳಿಯಿತು.
23 : ಅವನು ಕೂಡಲೆ ತನ್ನ ಬಂಧುಬಳಗದವರನ್ನು ಕರೆದುಕೊಂಡು, ಏಳುದಿನ ಪ್ರಯಾಣ ಮಾಡಿ ಯಕೋಬನನ್ನು ಹಿಂದಟ್ಟಿ ಗಿಲ್ಯಾದ್ ಗುಡ್ಡಗಾಡಿನಲ್ಲಿ ಸಂಧಿಸಿದನು.
24 : ಆ ರಾತ್ರಿಯಲ್ಲಿ ದೇವರು ಆರಾಮ್ಯನಾದ ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆ, ಯಕೋಬನಿಗೆ ನೀನು ಯಾವ ಬೆದರಿಕೆಯನ್ನೂ ಹಾಕಬೇಡ!” ಎಂದು ಇದ್ದರು.
25 : ಲಾಬಾನನು, ಯಕೋಬನನ್ನು ಎದುರುಗೊಂಡಾಗ ಯಕೋಬನು ಬೆಟ್ಟದಲ್ಲಿ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಕೂಡ ತನ್ನವರೊಡನೆ ಅದೇ ಗಿಲ್ಯಾದ್ ಬೆಟ್ಟದಲ್ಲಿ ಗುಡಾರ ಹಾಕಿಸಿದನು.
26 : ಲಾಬಾನನು ಯಕೋಬನಿಗೆ, “ನೀನು ಹೀಗೆ ಮಾಡಬಹುದೆ? ನನ್ನ ಹೆಣ್ಣು ಮಕ್ಕಳನ್ನು ಯುದ್ದದಲ್ಲಿ ಸೆರೆಹಿಡಿದ ಕೈದಿಗಳಂತೆ ಎಳೆದುಕೊಂಡು ಓಡಿಬಂದಿರುವೆಯಲ್ಲಾ;
27 : ನನಗೆ ಏನೂ ಹೇಳದೆ ವಂಚಿಸಿ ಏಕೆ ಓಡಿ ಬಂದೆ? ನನಗೆ ತಿಳಿಸಿದ್ದರೆ ಸಂಗೀತ ಸಂಭ್ರಮದೊಂದಿಗೆ, ತಾಳ ಮೇಳ ವಾದ್ಯಗಳೊಂದಿಗೆ ನಿನ್ನನ್ನು ಸಾಗಕಳುಹಿಸುತ್ತಿದ್ದೆ.
28 : ನನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು ಬೀಳ್ಕೊಡಲೂ ಆಗದಂತೆ ಮಾಡಿದೆ. ನೀನು ಮಾಡಿದ್ದು ಎಂಥ ಹುಚ್ಚು ಕೆಲಸ.
29 : ನಿಮಗೆ ಹಾನಿಮಾಡುವ ಸಾಮಥ್ರ್ಯ ನನಗಿದೆ. ಆದರೆ ಕಳೆದ ರಾತ್ರಿ ನಿಮ್ಮ ತಂದೆಯ ದೇವರು, “ಯಕೋಬನಿಗೆ ಯಾವ ಬೆದರಿಕೆಯನ್ನೂ ಹಾಕಬೇಡ, ಎಚ್ಚರಿಕೆ!” ಎಂದು ತಿಳಿಸಿದರು.
30 : ತಂದೆಯ ಮನೆಗೆ ಹಿಂದಿರುಗುವ ಅಭಿಲಾಶೆಯಿಂದ ನೀನು ಹೀಗೆ ಬಂದು ಬಿಟ್ಟಿದ್ದೇನೋ ಸರಿ. ಆದರೆ ನನ್ನ ಕುಲ ದೇವರುಗಳನ್ನು ಕದ್ದದ್ದು ಏಕೆ?” ಎಂದು ಕೇಳಿದನು.
31 : ಅದಕ್ಕೆ ಪ್ರತ್ಯುತ್ತರವಾಗಿ ಯಕೋಬನು, “ನೀವು ನಿಮ್ಮ ಹೆಣ್ಣುಮಕ್ಕಳನ್ನು ಬಲಾತ್ಕಾರದಿಂದ ಕಿತ್ತುಕೊಳ್ಳುವಿರಿ ಎಂದು ಭಯಪಟ್ಟು ಹೀಗೆ ಹೊರಟು ಬಂದೆ.
32 : ಆದರೆ ನಿಮ್ಮ ಕುಲ ದೇವರುಗಳ ವಿಗ್ರಹಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವನು ಸಾಯಲಿ. ನಮ್ಮ ಬಂಧು ಬಳಗದವರ ಎದುರಿನಲ್ಲೇ ನನ್ನ ಸೊತ್ತನ್ನು ಪರೀಕ್ಷಿಸಬಹುದು. ಅದರಲ್ಲಿ ನಿಮ್ಮದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೊಳ್ಳಬಹುದು,” ಎಂದು ಹೇಳಿದನು. ಆ ಕುಲದೇವರುಗಳ ವಿಗ್ರಹಗಳನ್ನು ಕದ್ದವಳು ರಾಖೇಲಳೆಂದು ಯಕೋಬನಿಗೆ ತಿಳಿದಿರಲಿಲ್ಲ.
33 : ಲಾಬಾನನು ಯಕೋಬನ ಗುಡಾರದಲ್ಲೂ, ಲೇಯಳ ಗುಡಾರದಲ್ಲೂ ಹಾಗು ಆ ಇಬ್ಬರು ದಾಸಿಯರ ಗುಡಾರದಲ್ಲೂ ಹುಡುಕಿದನು. ಏನೂ ಸಿಕ್ಕಲಿಲ್ಲ. ಲೇಯಳ ಗುಡಾರವನ್ನು ಬಿಟ್ಟು ರಾಖೇಲಳ ಗುಡಾರಕ್ಕೆ ಬಂದನು.
34 : ರಾಖೇಲಳು ಆ ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಬರದೊಳಗಿಟ್ಟು, ಅವುಗಳ ಮೇಲೆ ಕುಳಿತಿದ್ದಳು. ಲಾಬಾನನು ಗುಡಾರದಲ್ಲಿದ್ದ ಸಾಮಾನುಗಳನ್ನೆಲ್ಲ ಮುಟ್ಟಿ ಮುಟ್ಟಿ ನೋಡಿದನು. ವಿಗ್ರಹಗಳು ಕಾಣಲಿಲ್ಲ.
35 : ರಾಖೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿಮ್ಮ ಮುಂದೆ ಎದ್ದು ನಿಂತುಕೊಳ್ಳಲಾಗದೆ ಇದ್ದೇನೆ, ಕೋಪಿಸಿಕೊಳ್ಳಬೇಡಿ, ನಾನು ಮುಟ್ಟಾಗಿದ್ದೇನೆ,” ಎಂದು ಹೇಳಿದಳು. ಎಂದೇ ಲಾಬಾನನು ಎಷ್ಟು ಹುಡುಕಿ ನೋಡಿದರೂ ಆ ವಿಗ್ರಹಗಳನ್ನು ಕಂಡುಹಿಡಿಯಲಾಗಲಿಲ್ಲ.
36 : ಆಗ ಯಕೋಬನಿಗೆ ಸಿಟ್ಟು ಬಂದಿತು. ಅವನು ಲಾಬಾನನೊಡನೆ ಹೀಗೆಂದು ವಾಗ್ವಾದ ಮಾಡಿದನು - “ನೀವು ಇಷ್ಟು ಆತುರಪಟ್ಟು ನನ್ನನ್ನು ಹಿಂದಟ್ಟಿ ಬರಲು ನಾನು ಮಾಡಿದ ತಪ್ಪೇನು?
37 : ನಾನು ಮಾಡಿದ ದ್ರೋಹವಾದರೂ ಏನು? ನೀವು ನನ್ನ ಸಾಮಾನುಗಳನ್ನೆಲ್ಲಾ ಪರೀಕ್ಷಿಸಿ ನೋಡಿದ್ದಾಯಿತು; ನಿಮ್ಮ ಸೊತ್ತೇನಾದರೂ ಸಿಕ್ಕಿದೆಯೇ? ಸಿಕ್ಕಿದ್ದರೆ ನನ್ನವರ ಮುಂದೆಯೂ ನಿಮ್ಮವರ ಮುಂದೆಯೂ ತಂದಿಡಿ, ನೋಡೋಣ. ಅವರೇ ನಮ್ಮಿಬ್ಬರ ನ್ಯಾಯವನ್ನು ತೀರಿಸಲಿ.
38 : ಇದಕ್ಕಾಗಿಯೇ ನಾನು ಇಪ್ಪತ್ತು ವರ್ಷ ನಿಮ್ಮ ಬಳಿ ಇದ್ದುದು? ನಿಮ್ಮ ಆಡುಕುರಿಗಳು ಕಂದು ಹಾಕಲಿಲ್ಲ; ನಿಮ್ಮ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ;
39 : ಕಾಡುಮೃಗಗಳು ಕೊಂದ ಆಡುಕುರಿಗಳ ಅಳಿದುಳಿಕೆಗಳನ್ನು ನಿಮಗೆ ತಂದುತೋರಿಸದೆ, ನಾನೇ ಈಡು ತೆತ್ತಿದ್ದೇನೆ. ಹಗಲಲ್ಲಾಗಲಿ, ರಾತ್ರಿಯಲ್ಲಾಗಲಿ ಕದ್ದುಹೋದ ಜಾನುವಾರುಗಳಿಗೆ ಪರಿಹಾರವನ್ನು ನನ್ನ ಕೈಯಿಂದಲೆ ಕಿತ್ತುಕೊಂಡಿದ್ದೀರಿ.
40 : ಹಗಲಿನ ಬೇಗೆಯಿಂದಲೂ ಇರುಳಿನ ಚಳಿಯಿಂದಲೂ ಕರಗಿ ಹೋಗಿದ್ದೆ; ಕಣ್ಣುಗಳಿಗೆ ನಿದ್ರೆ ದೂರವಾಗಿತ್ತು.
41 : ಇಂಥ ಪರಿಸ್ಥಿತಿಯಲ್ಲೂ ಇಪ್ಪತ್ತು ವರ್ಷ ನಿಮ್ಮ ಮನೆಯಲ್ಲಿದ್ದು ನಿಮ್ಮಿಬ್ಬರ ಹೆಣ್ಣು ಮಕ್ಕಳಿಗಾಗಿ ಹದಿನಾಲ್ಕು ವರ್ಷ ಹಾಗೂ ನಿಮ್ಮ ಆಡುಕುರಿಗಳಿಗಾಗಿ ಆರು ವರ್ಷ ದುಡಿದಿದ್ದೇನೆ. ಹೀಗಿದ್ದರೂ ಹತ್ತು ಸಾರಿ ನೀವು ನನ್ನ ಸಂಬಳವನ್ನು ಬದಲಾಯಿಸಿದಿರಿ.
42 : ನನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನು ಭಯಭಕ್ತಿಯಿಂದ ಸೇವಿಸಿದ ದೇವರು ಆಗಿರುವಂಥವರು ನನ್ನ ಕಡೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀವು ನನ್ನನ್ನು ಬರಿಗೈಯಾಗಿ ಕಳುಹಿಸುತ್ತಿದ್ದಿರಿ. ದೇವರು ನನ್ನ ಕಷ್ಟದುಃಖವನ್ನೂ ನಾನು ಪಟ್ಟ ಪ್ರಯಾಸವನ್ನೂ ಗಮನಿಸಿದ್ದಾರೆ. ಆದ್ದರಿಂದಲೇ ನಿನ್ನೆಯ ರಾತ್ರಿ ನಿಮಗೆ ಎಚ್ಚರಿಕೆ ನೀಡಿದ್ದಾರೆ,” ಎಂದನು.
43 : ಆಗ ಲಾಬಾನನು ಯಕೋಬನಿಗೆ, “ಈ ಮಹಿಳೆಯರು ನನ್ನ ಪುತ್ರಿಯರು, ಈ ಮಕ್ಕಳು ನನ್ನ ಮೊಮ್ಮಕ್ಕಳು, ಈ ಹಿಂಡುಗಳು ನನಗೆ ಸೇರಿದವು; ನಿನ್ನ ಕಣ್ಮುಂದೆ ಇರುವುದೆಲ್ಲವೂ ನನ್ನವೇ ಇಂತಿರುವಲ್ಲಿ ಈ ನನ್ನ ಪುತ್ರಿಯರಿಗೇ ಆಗಲಿ, ಇವರು ಹೆತ್ತ ಮಕ್ಕಳಿಗೇ ಆಗಲಿ, ನಾನೀಗ ಏನೂ ಹಾನಿ ಮಾಡಹೋಗುವುದಿಲ್ಲ.
44 : ಬಾ, ನಾನೂ ನೀನೂ ಒಂದು ಒಪ್ಪಂದ ಮಾಡಿಕೊಳ್ಳೋಣ; ಅದು ನನಗೂ ನಿನಗೂ ಸಾಕ್ಷಿಯಾಗಿರಲಿ,” ಎಂದು ಹೇಳಿದನು.
45 : ಆಗ ಯಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ಮಾರಕಸ್ತಂಭವಾಗಿ ನಿಲ್ಲಿಸಿದನು.
46 : ಅದಲ್ಲದೆ, ತನ್ನ ಕಡೆಯವರಿಗೆ, “ಕಲ್ಲುಗಳನ್ನು ಒಟ್ಟುಗೂಡಿಸಿರಿ”, ಎನ್ನಲು, ಅವರು ಕಲ್ಲುಗಳನ್ನು ತಂದು ಒಂದು ಕುಪ್ಪೆ ಮಾಡಿದರು; ಅದರ ಬಳಿಯಲ್ಲೆ ಕುಳಿತು ಸಹಭೋಜನ ಮಾಡಿದರು.
47 : ಆ ಕುಪ್ಪೆಗೆ ಲಾಬಾನನು ‘ಯಗರಸಾಹದೂತ’ ಎಂದೂ ಯಕೋಬನು ‘ಗೆಲೇದ್’ ಎಂದೂ ಹೆಸರಿಟ್ಟರು.
48 : ಲಾಬಾನನು ಯಕೋಬನಿಗೆ, “ಈ ದಿನ ನಿನಗೂ ನನಗೂ ಆದ ಒಪ್ಪಂದಕ್ಕೆ ಈ ಕುಪ್ಪೆಯೇ ಸಾಕ್ಷಿ” ಎಂದು ಹೇಳಿದ ಕಾರಣ ಅದಕ್ಕೆ ‘ಗೆಲೇದ್’ ಎಂದು ಹೆಸರಾಯಿತು.
49 : ಅಂತೆಯೇ ಲಾಬಾನನು, “ನಾವು ಒಬ್ಬರನ್ನೊಬ್ಬರು ಬಿಟ್ಟು ಅಗಲಿದಾಗಲು ಸರ್ವೇಶ್ವರ ನಮ್ಮಿಬ್ಬರನ್ನೂ ನೋಡಿಕೊಳ್ಳುತ್ತಾ ಇರಲಿ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ‘ಮಿಚ್ಪಾ’ ಎಂದು ಹೆಸರಾಯಿತು.
50 : ಲಾಬಾನನು ಮುಂದುವರೆದು, “ನೀನು ನನ್ನ ಹೆಣ್ಣುಮಕ್ಕಳನ್ನು ನೋಯಿಸಿದರೆ ಅಥವಾ ಬೇರೆ ಹೆಣ್ಣುಗಳನ್ನು ಮದುವೆಮಾಡಿಕೊಂಡರೆ ವಿಚಾರಿಸುವವರು ನಮ್ಮಲ್ಲಿ ಯಾರು ಇಲ್ಲದಿದ್ದರೂ ದೇವರೇ ನಮ್ಮ ಒಪ್ಪಂದಕ್ಕೆ ಸಾಕ್ಷಿಯೆಂಬುದನ್ನು ಮರೆಯಬೇಡ,” ಎಂದನು.
51 : ಅವನು ಮತ್ತೆ ಯಕೋಬನಿಗೆ, “ಇಗೋ, ನೋಡು ನನಗೂ ನಿನಗೂ ನಡುವೆ ನಿಂತಿರುವ ಕುಪ್ಪೆ ಮತ್ತು ಸ್ಮಾರಕಸ್ತಂಭ.
52 : ಕೇಡು ಮಾಡುವ ಉದ್ದೇಶದಿಂದ ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಬಳಿಗೆ ಬರಕೂಡದು. ಹಾಗೆಯೇ ನೀನು ಈ ಕುಪ್ಪೆಯನ್ನಾಗಲಿ ಸ್ತಂಭವನ್ನಾಗಲಿ ದಾಟಿ ನನ್ನ ಬಳಿಗೆ ಬರಕೂಡದು. ಇದಕ್ಕೆ ಈ ಕುಪ್ಪೆ ಹಾಗೂ ಈ ಸ್ತಂಭವೇ ಸಾಕ್ಷಿ.
53 : ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಗಳ ದೇವರು ನಿನಗೂ ನನಗೂ ನ್ಯಾಯ ತೀರಿಸಲಿ,” ಎಂದನು. ಅದೇ ಮೇರೆಗೆ ಯಕೋಬನು, ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಆರಾಧಿಸುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣ ಮಾಡಿದನು.
54 : ಅಲ್ಲದೆ, ಯಕೋಬನು ಆ ಬೆಟ್ಟದ ಮೇಲೆ ಬಲಿಯನ್ನರ್ಪಿಸಿ ಬಂಧುಗಳನ್ನು ತನ್ನೊಡನೆ ಸಹಭೋಜನಕ್ಕೆ ಕರೆಸಿದನು. ಅವರು ಸಹಭೋಜನ ಮಾಡಿ ಆ ರಾತ್ರಿಯೆಲ್ಲಾ ಬೆಟ್ಟದ ಮೇಲಿದ್ದರು.
55 : ಬೆಳಿಗ್ಗೆ ಲಾಬಾನನು ಎದ್ದು, ತನ್ನ ಪುತ್ರಿಯರಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು, ಆಶೀರ್ವದಿಸಿ, ತನ್ನ ಊರಿಗೆ ಹೊರಟು ಹೋದನು.

Holydivine