Genesis - Chapter 16
Holy Bible

1 : ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಈಜಿಪ್ಟ್ ದೇಶದವಳಾದ ಹಾಗರಳೆಂಬ ಒಬ್ಬ ದಾಸಿ ಇದ್ದಳು.
2 : ಎಂದೇ ಸಾರಯಳು ಅಬ್ರಾಮನಿಗೆ, “ನೋಡಿ, ನನಗೇನೋ ಸರ್ವೇಶ್ವರಸ್ವಾಮಿ ಮಕ್ಕಳನ್ನು ದಯಪಾಲಿಸಲಿಲ್ಲ; ನೀವು ನನ್ನ ದಾಸಿಯನ್ನು ಸೇರಬೇಕು. ಬಹುಶಃ ಅವಳ ಮೂಲಕವಾದರೂ ನನಗೆ ಮಕ್ಕಳಾದೀತು,” ಎಂದು ಹೇಳಿದಳು. ಅಬ್ರಾಮನು ಆಕೆಯ ಮಾತಿಗೆ ಸಮ್ಮತಿಸಿದನು.
3 : ಹೀಗೆ ಹತ್ತು ವರ್ಷ ಕಾನಾನ್ ನಾಡಿನಲ್ಲಿ ವಾಸಮಾಡಿದ ಮೇಲೆ ಅಬ್ರಾಮನ ಹೆಂಡತಿ ಸಾರಯಳು ಈಜಿಪ್ಟಿನ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಉಪಪತ್ನಿಯಾಗಿ ಒಪ್ಪಿಸಿದಳು.
4 : ಅಬ್ರಾಮನು ಹಾಗರಳನ್ನು ಕೂಡಿದನು. ಅವಳು ಗರ್ಭಿಣಿಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದ ಅವಳು, ತನ್ನ ಯಜಮಾನಿಯನ್ನೇ ತಾತ್ಸಾರ ಮಾಡತೊಡಗಿದಳು.
5 : ಆಗ ಸಾರಯಳು ಅಬ್ರಾಮನಿಗೆ, “ನನಗೆ ಅನ್ಯಾಯವಾಗುತ್ತಿದೆ; ಇದಕ್ಕೆ ನೀವೇ ಹೊಣೆ. ನನ್ನ ದಾಸಿಯನ್ನು ನಿಮಗೆ ಉಪಪತ್ನಿಯಾಗಿ ಕೊಟ್ಟೆನಷ್ಟೆ; ಇವಳೋ, ತಾನು ಗರ್ಭಿಣಿಯಾದೆನೆಂದು ತಿಳಿದದ್ದೆ, ನನ್ನನ್ನು ತಾತ್ಸಾರಮಾಡುತ್ತಿದ್ದಾಳೆ; ಈಗ ಸರ್ವೇಶ್ವರಸ್ವಾಮಿಯೇ ನಿಮಗೂ ನನಗೂ ನ್ಯಾಯ ತೀರಿಸಬೇಕು,” ಎಂದು ದೂರಿದಳು.
6 : ಅದಕ್ಕೆ ಅಬ್ರಾಮನು, “ನಿನ್ನ ದಾಸಿ ನಿನ್ನ ಕೈಯಲ್ಲೇ ಇದ್ದಾಳೆ. ನಿನಗಿಷ್ಟಬಂದಂತೆ ಮಾಡು,” ಎಂದುಬಿಟ್ಟನು. ಬಳಿಕ ಸಾರಯಳು ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಹಾಗರಳು ಓಡಿಹೋದಳು.
7 : ಮರಳುಗಾಡಿನಲ್ಲಿ ಶೂರಿಗೆ ಹೋಗುವ ಹಾದಿಪಕ್ಕದಲ್ಲಿದ್ದ ಒಂದು ಒರತೆಯ ಬಳಿ ಸ್ವಾಮಿಯ ದೂತನು ಅವಳನ್ನು ಕಂಡನು
8 : “ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ವಿಚಾರಿಸಿದನು. “ನನ್ನ ಯಜಮಾನಿ ಸಾರಯಳ ಬಳಿಯಿಂದ ಓಡಿಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟಳು.
9 : ಅದಕ್ಕೆ ಆ ದೂತನು, “ನಿನ್ನ ಯಜಮಾನಿಯ ಬಳಿಗೆ ಹಿಂತಿರುಗು, ಅವಳಿಗೆ ತಗ್ಗಿ ನಡೆದುಕೊ,” ಎಂದು ತಿಳಿಸಿದನು.
10 : ಅದೂ ಅಲ್ಲದೆ ಸ್ವಾಮಿಯ ದೂತನು, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ದೊಡ್ಡದಾಗಿಸುವೆನು,” ಎಂದು ಹೇಳಿ ಇಂತೆಂದನು:
11 : ಹುಟ್ಟುವನು ಮಗನೊಬ್ಬನು ಗರ್ಭಿಣಿಯಾದ ನಿನಗೆ ಇಷ್ಮಾಯೇಲೆಂಬ ಹೆಸರನು ಇಡು ಅವನಿಗೆ ಕಾರಣ - ಸರ್ವೇಶ್ವರ ಕಿವಿಗೊಟ್ಟಿಹನು ನಿನ್ನ ಮೊರೆಗೆ.
12 : ಬಾಳುವನವನು ಕಾಡುಗತ್ತೆಯಂತೆ ಎತ್ತುವನು ಕೈಯನು ಎಲ್ಲರ ಮೇಲೆ, ಎತ್ತುವರೆಲ್ಲರು ಕೈ ಅವನ ಮೇಲೆ ಬಾಳುವನು ಸೋದರರಿಗೆ ಎದುರು ಬದುರಾಗೆ.”
13 : ಹಾಗರಳು, “ನನ್ನನ್ನು ನೋಡುವಾತ ದೇವರನ್ನು ನಾನಿಲ್ಲೇ ನೋಡಿಬಿಟ್ಟೆನಲ್ಲಾ!” ಎಂದುಕೊಂಡು ತನ್ನ ಸಂಗಡ ಮಾತನಾಡಿದ ಸರ್ವೇಶ್ವರಸ್ವಾಮಿಗೆ, “ಎಲ್ಲವನ್ನು ನೋಡುವಾತ ದೇವರು” ಎಂದು ಹೆಸರಿಟ್ಟಳು.
14 : ಈ ಕಾರಣ ಅಲ್ಲಿದ್ದ ಬಾವಿಗೆ “ಲಹೈರೋಯಿ” (ನನ್ನನ್ನು ನೋಡುವ ಜೀವ ಸ್ವರೂಪನ ಬಾವಿ) ಎಂದು ಹೆಸರಾಯಿತು.
15 : ಹಾಗರಳು ಅಬ್ರಾಮನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
16 : ಆಗ ಅಬ್ರಾಮನಿಗೆ ಎಂಬತ್ತಾರು ವರ್ಷವಾಗಿತ್ತು.

Holydivine